ವೂಲಸ್ಟನ್, ವಿಲಿಯಮ್ ಹೈಡ್
	1766-1828. ಆಂಗ್ಲ ರಸಾಯನ ಮತ್ತು ಭೌತವಿಜ್ಞಾನಿ. ತಂದೆ ¥sóÁ್ರನ್ಸಿಸ್ ಒಬ್ಬ ಪಾದ್ರಿ, ತಾಯಿ ಆಲ್‍ಥಿಯ (ಹೈಡ್). ಪ್ರಾಥಮಿಕ ಕಲಿಕೆ ಚಾರ್ಟರ್‍ಹೌಸ್‍ನಲ್ಲಿ. ಅನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ (1782-87). ವೈದ್ಯಕೀಯದಲ್ಲಿ ಪದವಿ (1793). ಒಡನೆ ರಾಯಲ್ ಸೊಸೈಟಿಯ ಸದಸ್ಯತ್ವ. ಸ್ವಲ್ಪಕಾಲ ವೈದ್ಯವೃತ್ತಿ, ತರುವಾಯ ಹಂಫ್ರಿ ಡೇವಿ (1778-1829) ಸಹಚರ್ಯೆಯಲ್ಲಿ ಸಂಶೋಧನೆ. ಜೋಸೆಫ್ ಬ್ಯಾಂಕ್ಸ್ (1744-1820) ನಿವೃತ್ತಿ ಅನಂತರ ರಾಯಲ್ ಸೊಸೈಟಿಯ ಅಧ್ಯಕ್ಷತೆ (1820).

	ಈತ ರೂಪಿಸಿದ ಚೂರ್ಣ ಲೋಹವಿದ್ಯೆ (ಪೌಡರ್ ಮೆಟಲರ್ಜಿ) ತಂತ್ರ ಇಂದೂ ಪ್ರಸ್ತುತ. ಪ್ಲ್ಯಾಟಿನಮ್, ಟಂಗ್‍ಸ್ಟನ್, ಮಾಲಿಬ್ಡಿನಮ್ ಮತ್ತು ಇತರ ಸಂಕ್ರಮಣ ಲೋಹಗಳ ಸಂಪಾದನೆಗೆ ಈ ತಂತ್ರ ಸಹಾಯಕ. ಅಂದು (1804) ಅಗಾಧ ಪ್ರಮಾಣ ಪ್ಲ್ಯಾಟಿನಮ್ (ಅಶುದ್ಧ ಪ್ಲ್ಯಾಟಿನಮ್) ಲಭ್ಯವಿದ್ದರೂ ಅದರಿಂದ ಅಮೂಲ್ಯ ರಾಸಾಯನಿಕ ಸಂಶೋಧನೆಗೆ ಅಗತ್ಯವಾದ ಪತ್ರಶೀಲ ಪ್ಲ್ಯಾಟಿನಮ್ ಲೋಹ ತಯಾರಿಸುವ ವಿಧಾನ ಗೊತ್ತಿರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿ ವೂಲಸ್ಟನ್ ಕೃತನಾಮನಾಗಿದ್ದಾನೆ. ತತ್ಸಂಬಧೀಧಾತುಗಳಾದ ಪೆಲೇಡಿಯಮ್ (1803) ಮತ್ತು ರೋಡಿಯಮ್ (1804) ಧಾತುಗಳನ್ನೂ ಪತ್ತೆಮಾಡಿದ. ನಿಯೋಬಿಯಮ್ ಮತ್ತು ಟೈಟೇನಿಯಮ್‍ಗಳು ಕೂಡ ಮೂಲಧಾತುಗಳೆಂದು ಖಚಿತ ಪಡಿಸಿದವನೂ ಈತನೇ. ಸ್ಫಟಿಕಗಳಲ್ಲಿ ಅಂಗ ಕಣಗಳ ಜ್ಯಾಮಿತೀಯ ಜೋಡಣೆ, ಸ್ಫಟಿಕ ಮುಖಗಳ ನಡುವಣ ಕೋನಗಳನ್ನು ನಿಖರವಾಗಿ ಅಳೆಯಬಲ್ಲ ಪ್ರತಿಫಲಕ ಕೋನಮಾಪಕದ (ರಿ¥sóÉ್ಲಕ್ಟಿಂಗ್ ಗಾನಿಯೊಮೀಟರ್) ವಿನ್ಯಾಸ, ಪರಿದರ್ಶಕ (ಪೆರಿಸ್ಕೋಪಿಕ್) ಕನ್ನಡಕಗಳು, ನಿಮ್ನ ಮತ್ತು ಪೀನ ಪಕ್ಕಗಳುಳ್ಳ ಮಸೂರಗಳು (ವಸ್ತುವನ್ನು ನಾನಾ ಕೋನಗಳಲ್ಲಿ ನೋಡಲು ಸಹಾಯಕ), ಗಾಜಿನ ಚತುರ್ಮುಖಿ ಅಶ್ರಗವನ್ನೂ ಅಳವಡಿಸಲಾಗಿದ್ದ ಲ್ಯೂನಿಡ ಕ್ಯಾಮೆರ-ಇವು ಈತ ಸ್ಫಟಿಕವಿಜ್ಞಾನಕ್ಕೆ ನೀಡಿದ ಕೊಡುಗೆಗಳು. 1803ರಲ್ಲಿ ಈತ ನಿರ್ಮಿಸಿದ “ಡಿಪ್‍ಸೆಕ್ಟರ್” (ಸುಧಾರಿತ ಸೆಕ್ಸನ್ಟ್) ರಸ್ ಮತ್ತು ಪೆರ್ರಿಯವರ ಉತ್ತರ ಶೀತವಲಯಸಮೀಕ್ಷೆಯಲ್ಲಿ ನೆರವಾಯಿತು. ಸೌರ ರೋಹಿತ ದಲ್ಲಿರುವುದು ನಾಲ್ಕೇ ಬಣ್ಣಗಳು, ಅದರಲ್ಲಿ ಕೃಷ್ಣರೇಖೆಗಳಿವೆ (ಮುಂದೆ ಇವನ್ನೇ ¥sóÁ್ಯನ್‍ಹೋ¥sóÀರ್ ರೇಖೆಗಳೆಂದು ಕರೆಯಲಾಯಿತು) ಎಂಬುದೂ ಈತನ ಆವಿಷ್ಕಾರ. 1808ರಲ್ಲಿ ಈತ ಕಾರ್ಬೊನೇಟ್‍ಗಳು, ಸಲ್ಫೇಟ್‍ಗಳು ಮತ್ತು ಆಕ್ಸಲೇಟ್‍ಗಳನ್ನು ಕುರಿತು ನಡೆಸಿದ ಪ್ರಯೋಗಗಳಿಂದ ಈ ಬಗೆಯ ಸಂಯುಕ್ತಗಳೂ ಗುಣಿತಾನುಪಾತನಿಯಮಕ್ಕೆ ಬದ್ಧವೆಂದು ಗೊತ್ತಾಯಿತು. ಈತ ಪ್ರತಿಪಾದಿಸಿದ ಧಾತುಗಳ “ಸಮಾನತೂಕ” ನಿಯಮ ರಾಸಾಯನಿಕ ಗಣನೆಗಳಿಗೆ ಆಧಾರವಾಯಿತು.

	ಈತ ರೂಪಿಸಿದ ಲಘುಗಣಕೀಯ ಜಾರು ಅಳತೆಪಟ್ಟಿಯಿಂದ (ಲಾಗರಿತಮಿಕ್ ಸ್ಲೈಡ್‍ರೂಲ್) (ಆಕ್ಸಿಜನ್=10 ಪ್ರಮಾಣಕವಾಗಿರುವ) ಸಂಯುಕ್ತಗಳ ಸಂಯೋಜನೆಯನ್ನು ಗಣಿಸಬಹುದಾಗಿತ್ತು. ಇದು ಸುಮಾರು ಎರಡು ದಶಕಗಳ ಕಾಲ ಬಳಕೆಯಲ್ಲಿತ್ತು. ಇದರ ಸಲುವಾಗಿ ಈಗ ಆಧುನಿಕ ಉಪಕರಣಗಳಿವೆ.

	ಈತ ಸಾದರಪಡಿಸಿದ 56 ಸಂಶೋಧನ ಪ್ರಬಂಧಗಳ ಪೈಕಿ ರಸಾಯನ, ಭೌತ, ಸಸ್ಯ, ಶರೀರ, ಸ್ಫಟಿಕ ಮತ್ತು ರೋಗವಿಜ್ಞಾನಗಳ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಪ್ರಸ್ತಾಪವಿದೆ. ಇದರಿಂದ ಇವನ ಸಂಶೋಧನೆಯ ವ್ಯಾಪ್ತಿ, ವೈವಿಧ್ಯ ಮತ್ತು ಮಹತ್ತ್ವದ ಅರಿವು ಉಂಟಾಗುತ್ತದೆ. ಹೀಗೆ ಬಹುಮುಖ ಪ್ರತಿಭಾನ್ವಿತನಾದ ಈತನ ಗೌರವಾರ್ಥ ನೈಸರ್ಗಿಕ ಕ್ಯಾಲ್ಸಿಯಮ್ ಸಿಲಿಕೇಟ್ [ಅಚಿSiಔ3] ಖನಿಜವನ್ನು “ವೂಲ್‍ಸ್ಟನೈಟ್” ಎಂದು ಹೆಸರಿಸಿದ್ದಾರೆ.			
		(ಎಚ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ